ಎಸ್.ಸಿ.ನಂದೀಮಠ. 
1900-1975. ಕರ್ನಾಟಕದ ಪ್ರಮುಖ ವಿದ್ವಾಂಸರಲೊಬ್ಬರು. ಉನ್ನತ ಶಿಕ್ಷಣಕ್ಕಾಗಿ ಶ್ರಮಿಸಿದ ಶಿಕ್ಷಣವೇತ್ತರು. ಇವರ ಪೂರ್ಣ ಹೆಸರು ಶಿವಲಿಂಗಯ್ಯ ಚೆನ್ನಬಸವಯ್ಯ ನಂದೀಮಠ. ಹುಟ್ಟಿದ್ದು ಬೆಳಗಾಂವಿ ಜಿಲ್ಲೆಯ ಗೋಕಾಕದಲ್ಲಿ, ಸುಸಂಸ್ಕøತ ಮಧ್ಯಮವರ್ಗದ ಮನೆತನದಲ್ಲಿ. ಧಾರವಾಡ ಹಾಗೂ ಮುಂಬಯಿ ನಗರಗಳಲ್ಲಿ ಮಾಧ್ಯಮಿಕ ಹಾಗೂ ಕಾಲೇಜು ವಿದ್ಯಾಭ್ಯಾಸ ಮುಗಿಸಿ, ಮುಂಬಯಿ ವಿಶ್ವವಿದ್ಯಾಲಯದ ಎಂ.ಎ. ಪದವೀಧರರಾದರು. ಸಂಸ್ಕøತ ಹಾಗೂ ಕನ್ನಡದಲ್ಲಿ ಪರಿಣತಿಯನ್ನು ಪಡೆದು ಲಂಡನ್ ವಿಶ್ವವಿದ್ಯಾಲಯದಲ್ಲಿ ಪ್ರೊ. ಬಾರ್ನೆಟ್ ಎಂಬ ಪ್ರಾಚ್ಯ ಪಂಡಿತರ ಮಾರ್ಗದರ್ಶನದಲ್ಲಿ ವೀರಶೈವ ಧರ್ಮ ಹಾಗೂ ತತ್ತ್ವಜ್ಞಾನಗಳ ಕೈಪಿಡಿ ಎಂಬ ಒಂದು ಮಹಾ ಪ್ರಬಂಧವನ್ನು ಬರೆದು ಲಂಡನ್ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು. ಲಂಡನ್ನಿನಿಂದ ಮರಳಿದ ಅನಂತರ ಶಿಕ್ಷಣ ಹಾಗೂ ಜ್ಞಾನಾರ್ಜನೆಯಲ್ಲಿ ಆಸಕ್ತಿಯುಳ್ಳವರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ನಿರ್ಧರಿಸಿ ಬೆಳಗಾಂವಿಯ ಕರ್ನಾಟಕ ಲಿಂಗಾಯತ ಎಜ್ಯುಕೇಷನ್ ಸೊಸೈಟಿಯವರು ಸ್ಥಾಪಿಸಬೇಕೆಂದಿದ್ದ ಲಿಂಗರಾಜ ಕಾಲೇಜಿನ ಸ್ಥಾಪನೆಗಾಗಿ ದುಡಿದು ಅನಂತರ ಅದೇ ಕಾಲೇಜಿನ ಪ್ರಥಮ ಪ್ರಿನ್ಸಿಪಾಲರಾಗಿ ಹಲವು ವರ್ಷ ಕೆಲಸಮಾಡಿ ಅದನ್ನು ಒಂದು ಬೃಹತ್ ಸಂಸ್ಥೆಯನ್ನಾಗಿ ಬೆಳೆಸಿದರು. ಮುಂಬಯಿ ವಿಶ್ವವಿದ್ಯಾಲಯದ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿದ್ದಾಗ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕವಾದೊಂದು ವಿಶ್ವವಿದ್ಯಾಲಯವನ್ನು ಪಡೆಯಲು ಶ್ರಮಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಆರಂಭವಾಗುವಾಗ ಅದರ ರೂಪರೇಷೆಗಳನ್ನು ಕಾಯದೆ ಕಾನೂನುಗಳನ್ನು ರೂಪಿಸುವಲ್ಲಿ ಅತಿ ಮಹತ್ತ್ವದ ಕೆಲಸಮಾಡಿದ ನಾಲ್ಕಾರು ಶಿಕ್ಷಣತಜ್ಞರಲ್ಲಿ ಇವರೊಬ್ಬರಾಗಿದ್ದರು. ವಿಶ್ವವಿದ್ಯಾಲಯದ ಸೆನೆಟ್, ಸಿಂಡಿಕೇಟ್, ಅಕೆಡಮಿಕ್ ಕೌನ್ಸಿಲ್ ಹಾಗೂ ಉಳಿದ ಅನೇಕ ಸಮಿತಿಗಳ ಸದಸ್ಯರಾಗಿ ಸ್ಮರಣೀಯವಾದ ಸೇವೆಸಲ್ಲಿಸಿದರು. ಮುಂದೆ ಲಿಂಗರಾಜ ಕಾಲೇಜನ್ನು ಬಿಟ್ಟಮೇಲೆ ಬಾಗಿಲುಕೋಟೆಯಲ್ಲಿ ಬಸವೇಶ್ವರ ಕಾಲೇಜನ್ನು ಪ್ರಾರಂಭಿಸಿ ಅದನ್ನು ಬೆಳೆಸಿದರು. ಸ್ವಲ್ಪಕಾಲ ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವರಾಗಿಯೂ ಕುಲಪತಿಗಳಾಗಿಯೂ ಕೆಲಸ ಮಾಡಿದರು. ವಿಶ್ವವಿದ್ಯಾಲಯದ ಸಂಸ್ಕøತ ಪ್ರಾದ್ಯಾಪಕರಾಗಿ ಸಂಶೋಧನೆ ಮಾರ್ಗದರ್ಶಕರಾಗಿ ಸೇವೆಸಲ್ಲಿಸಿದರು. ಸಂಸ್ಕøತ ಹಾಗೂ ಹಳೆಗನ್ನಡದ ಹಲವಾರು ಗ್ರಂಥಗಳನ್ನು ಸಂಪಾದಿಸಿ, ಪರಿಷ್ಕರಿಸಿ, ಅವುಗಳಿಗೆ ವಿದ್ವತ್‍ಪೂರ್ಣವಾದ ಮುನ್ನುಡಿಗಳನ್ನು ಬರೆದು ಪ್ರಕಟಿಸಿದರು.

ಕನ್ನಡ, ಸಂಸ್ಕøತ, ಪಾಲಿ, ಪ್ರಾಕೃತ, ಇಂಗ್ಲಿಷ್ ಭಾಷೆಗಳಲ್ಲಿ ಇವರಿಗೆ ಪ್ರಭುತ್ವವಿತ್ತು. ಉತ್ತಮ ಅಧ್ಯಾಪಕರೆಂದೂ ದಾನಿಗಳೆಂದೂ ಹೆಸರು ಗಳಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗಿರುವ ಕನ್ನಡ ನಾಡಿನ ಚರಿತ್ರೆ ಭಾಗ-2 (ಕರ್ನಾಟಕದ ಧರ್ಮಗಳು) ಇವರ ಅಮೂಲ್ಯ ಗ್ರಂಥ. 1938ರಲ್ಲಿ ಹೊರಬಂದ ಹ್ಯಾಂಡ್ ಬುಕ್ ಆಫ್ ವೀರಶೈವಿಸಂ (ಇವರಿಗೆ ಡಾಕ್ಟರೇಟ್ ತಂದ ಮಹಾಪ್ರಬಂಧ) ಎಂಬ ಆಂಗ್ಲಕೃತಿ ಇವರ ವಿದ್ವತ್ತಿಗೆ ಸಾಕ್ಷಿಯಾಗಿದೆ. 1941ರಲ್ಲಿ ಹರಿಹರನ ಗಿರಿಜಾಕಲ್ಯಾಣವನ್ನಿವರು ಸಂಪಾದಿಸಿ ಪ್ರಕಟಿಸಿದರು. ವೀರಶೈವ ತತ್ತ್ವಪ್ರಕಾಶದಲ್ಲಿನ ಲೇಖನ, ಹರಿಹರಪ್ರಶಸ್ತಿಯ ಮುನ್ನುಡಿಗಳು ಇವರ ಗಮನಾರ್ಹ ಬರಹಗಳು. 1952ರಲ್ಲಿ ಬೇಲೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನಿತ್ತು ಜನತೆ ಇವರನ್ನು ಗೌರವಿಸಿತು. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಇವರ ಸೇವೆ ಸಾಧನೆಗಳನ್ನು ಮನ್ನಿಸಿ, ಇವರಿಗೆ ಗೌರವ ಡಿ.ಲಿಟ್. ಪದವಿಯನ್ನಿತ್ತು ಗೌರವಿಸಿತು.
(ಎಸ್.ಎಸ್.ಡಬ್ಲ್ಯೂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ